ರಾಜಾದಿತ್ಯ
ಸು. 1190. ಜೈನಕವಿ. ಕನ್ನಡದಲ್ಲಿ ಮೊಟ್ಟಮೊದಲಿಗೆ ಗಣಿತ ಗ್ರಂಥಗಳನ್ನು ರಚಿಸಿದವ. ಈತ ವ್ಯವಹಾರ ಗಣಿತ, ಕ್ಷೇತ್ರಗಣಿತ, ವ್ಯವಹಾರ ರತ್ನ, ಲೀಲಾವತಿ, ಚಿತ್ರಹಸುಗೆ, ಜೈನಸೂತ್ರ ಗಣಿತ, ಟೀಕೋದಾಹರಣ ಮೊದಲಾದ ಗಣಿತ ಗ್ರಂಥಗಳನ್ನು ಕನ್ನಡ ಭಾಷೆಯಲ್ಲಿ ರಚಿಸಿದ್ದಾನೆ.
  	ಈತನ ವೈಯಕ್ತಿಕ ಜೀವನದ ವಿವರಗಳು ಈತ ರಚಿಸಿದ ಗ್ರಂಥಗಳಿಂದ ತಿಳಿದುಬರುತ್ತದೆ. ಈತನ ಸ್ಥಳ ಪೂವಿನಬಾಗೆ, ಗುರು ಶುಭಚಂದ್ರ, ತಂದೆ ಶ್ರೀಪತಿ, ತಾಯಿ ವಸಂತಿ, ಹೆಂಡತಿ ಕನಕಮಾಲೆ, ಅಣ್ಣ ಶಾಂತ, ಬಾಹುಬಲಿ ಭರತರಾತ್ಮೇಶ್ವರರ್ ಎಂದು ಹೇಳಿಕೊಂಡಿರುವುದರಿಂದಲೂ ಇವನಿಗೆ ಗಣಿತವಿಳಾಸ, ಓಜವೆಡಂಗ, ಪದ್ಯವಿದ್ಯಾಧರ, ಗಣಿತ ವಿರಿಂಚ, ಎಂಬ ಬಿರುದುಗಳು ಇರುವುದು ತಿಳಿದುಬರುವುದರಿಂದಲೂ ಈತನಿಗೆ ಬಾಹುಬಲಿ ಭರತರೆಂಬ ಆಶ್ರಯದಾತರಿದ್ದರೆಂದೂ ಈತ ರಾಜಸಭೆಗಳಲ್ಲಿ ಮನ್ನಣೆಗೆ ಪಾತ್ರನಾಗಿದ್ದನೆಂದೂ ಹೇಳಬಹುದು.
  	ಗಣಿತಶಾಸ್ತ್ರಕ್ಕೆ ಸಂಬಂಧಿಸಿದಂತೆ ಎಲ್ಲ ವಿಷಯಗಳನ್ನು ತನ್ನ ಗ್ರಂಥದಲ್ಲಿ ತಕ್ಕಮಟ್ಟಿಗೆ ಪ್ರತಿಪಾದಿಸಿದ್ದಾನೆ. ಕಠಿಣವಾದ ಈ ಶಾಸ್ತ್ರವನ್ನು ಜನರ ಮನಸ್ಸಿಗೆ ಅಹ್ಲಾದವನ್ನು ಉಂಟುಮಾಡುವಂತೆ ತಿಳಿಸಿ ಹೇಳುವುದು ಕಷ್ಟವಾದರೂ ಅದನ್ನು ಕವಿ ಅದನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವಂತೆ, ಮನಸ್ಸಿಗೆ ನಾಟುವಂತೆ ಪದ್ಯರೂಪದಲ್ಲಿ ವಿವರಿಸುತ್ತಾನೆ. ಇದರಿಂದ ಈತ ಗಣಿತಶಾಸ್ತ್ರದಲ್ಲಿ ಪ್ರಾವಿಣ್ಯ ಪಡೆದಿರುವುದಲ್ಲದೆ ಕವಿತಾ ಪ್ರೌಢಿಮೆಯನ್ನೂ ಹೊಂದಿದವನಾಗಿದ್ದ ಎಂಬುದು ತಿಳಿದುಬರುತ್ತದೆ. ಈತನ ಗ್ರಂಥಗಳಲ್ಲಿ ಕಂಡುಬರುವ ಸುಂದರ ವರ್ಣನೆಗಳು ಉತ್ಕøಷ್ಟವಾಗಿದ್ದು ಈತನ ಕವಿತಾ ಶಕ್ತಿಗೆ ಹೆಗ್ಗುರುತಾಗಿವೆ. ಆದರೆ ಈತನ ಯಾವ ಗ್ರಂಥಗಳೂ ಸಂಪೂರ್ಣವಾಗಿ ದೊರೆತಿಲ್ಲ. ದೊರೆತಿರುವ ಗ್ರಂಥಗಳಲ್ಲಿ ಪ್ರಕ್ಷೇಪಗಳು ಸೇರಿಕೊಂಡು ಮೂಲಪಾಠಕ್ಕೆ ಧಕ್ಕೆಯುಂಟಾಗಿದೆ. ಒಟ್ಟಿನಲ್ಲಿ ಲಭ್ಯ ಗ್ರಂಥಗಳಲ್ಲಿ ಹೇರಳವಾಗಿ ಸಿಕ್ಕುವ ಗಣಿತಶಾಸ್ತ್ರ ವಿಷಯಗಳೂ ಕನ್ನಡದ ಸೊಗಡನ್ನು ಮಿಡಿಯುವ ರಚನೆಗಳೂ ಸಾಹಿತ್ಯಾಸಕ್ತರ ಗಮನ ಸೆಳೆಯುತ್ತವೆ.								          
 (ಡಿ.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ